ಶಾರಿಪುತ್ರ
 	ಬುದ್ಧನ ಪ್ರಮುಖ ಶಿಷ್ಯರಲ್ಲಿ ಒಬ್ಬ. ಇವನ ತಾಯಿ ಶಾರಿ ಅಥವಾ ಶಾರದ್ವತೀ. ಇವನ ಜನ್ಮ ಸ್ಥಳ ನಾಲಂದಾ ಸಮೀಪದ ಒಂದು ಗ್ರಾಮ. ಇವನು ಮೊಗ್ಗಲ್ಲಾನನ ಸಹಪಾಠಿಯಾಗಿ ವಿದ್ಯಾಭ್ಯಾಸ ಮಾಡಿದ. ಇವನು ತನ್ನ ಸ್ನೇಹಿತ ಮೊಗ್ಗಲ್ಲಾನ (ಮೌದ್ಗಲ್ಯಾಯನ)ನೊಡನೆ ಬೌದ್ಧದೀಕ್ಷೆ ಪಡೆದ ಪ್ರಸಂಗ ಪ್ರಾಚೀನ ಮಹಾವಗ್ಗದಲ್ಲಿ ಬರುತ್ತದೆ. ಬುದ್ಧನ ಧರ್ಮಚಕ್ರಪ್ರವರ್ತನ ಕಾಲದಲ್ಲಿ ಅಶ್ವಜಿತ ಎಂಬ ಶಿಷ್ಯ ರಾಜಗೃಹದ ಬೀದಿಯಲ್ಲಿ ಹೋಗುತ್ತಿದ್ದಾಗ ಶಾರಿಪುತ್ರನೆಂಬ ಬ್ರಾಹ್ಮಣ ಶ್ರಮಣನು ಇವನ ತೇಜಸ್ಸನ್ನೂ ಪ್ರಶಾಂತಕಳೆಯನ್ನೂ ಕಂಡು ಅವನ ಬಳಿ ಹೋಗಿ ನಿನ್ನ ಗುರು ಯಾರೆಂದು ಕೇಳಿದ. ಅವನು ಮಹಾಸಮಣೋ ಸಕ್ಯಪುತ್ತೋ ಸಕ್ಯಕುಲಾ ಪಬ್ಬಜಿತೋ ಎಂದು ಬುದ್ಧನ ಹೆಸರನ್ನು ಹೇಳಿದ. ತತ್‍ಕ್ಷಣದಲ್ಲೇ ಶಾರಿಪುತ್ರ ಅವನಿದ್ದಲ್ಲಿಗೆ ಹೋಗಿ ಅವನ ಉಪದೇಶದಿಂದ ಪ್ರಭಾವಿತನಾಗಿ ಅವನ ಸಂಘವನ್ನು ಸೇರಿದ. ಈ ಪ್ರಸಂಗವನ್ನು ಆಧರಿಸಿ ಅಶ್ವಘೋಷ ಶಾರಿಪುತ್ರಪ್ರಕರಣವೆಂಬ ಸಂಸ್ಕøತ ನಾಟಕ ರಚಿಸಿದ್ದಾನೆ. ಅದರ ಖಂಡಗಳು ಉಪಲಬ್ಧವಾಗಿವೆ. ಬುದ್ಧನ ಸಂಘವನ್ನು ಸೇರುವ ಮೊದಲು ಇವನು ಸಂಜಯ ಬೆಲಟ್ಠೆಪುತ್ತನ ಬಳಿ ಇದ್ದನೆಂದು ಪ್ರತೀತಿ. ಇವನು ಬುದ್ಧ ಬದುಕಿದ್ದಾಗಾಲೇ ನಿಧನಹೊಂದಿದ. ಬೌದ್ಧ ಸಂಘವನ್ನು ರೂಪಿಸಿ, ಬೌದ್ಧಧರ್ಮ ಪ್ರಸರಣದಲ್ಲಿ ಶಾರಿಪುತ್ರನ ಪಾತ್ರ ತುಂಬ ದೊಡ್ಡದು. ಹೀಗೆಂದೇ ಥೇರ ಅಪದಾನ (ತ್ರಿಪಿಟಕದಲ್ಲೇ ಸೇರಿದ ಪ್ರಕರಣ) ಇವನ ಹೆಸರನ್ನೇ ಮೊಟ್ಟಮೊದಲು ಎತ್ತುತ್ತದೆ. ಅಭಿದಮ್ಮವನ್ನೂ ಇವನೇ ಕ್ರೋಡೀಕರಿಸಿದ. ಬುದ್ಧ ಬೆರಳಿನಿಂದ ಸಮುದ್ರ ತೋರಿಸಿದಂತೆ, ಇವನಿಗೆ ಅಭಿದಮ್ಮವನ್ನು ಮಾತೃಕೆಗಳಲ್ಲಿ ಹೇಳಿದನೆಂದೂ ಇವನು ಅದನ್ನು ಗ್ರಹಿಸಿ ವಿಸ್ತರಿಸಿದನೆಂದೂ ಸಂಪ್ರದಾಯದ ನಿರೂಪಣೆ. ಅಭಿದಮ್ಮ ಪಿಟಕಕ್ಕೆ ಸೇರಿದ ಧಮ್ಮಸಂಗಣಿಗೆ ಇರುವ ಅತ್ಥುದ್ಧಾರ (ಅಥೋ ಉದ್ಧಾರ) ಎಂಬ ಪರಿಶಿಷ್ಟವನ್ನು ಇವನೇ ಸಿದ್ಧಪಡಿಸಿದನೆಂದೂ ನಂಬಿಕೆ. ಇವನ ಹತ್ತು ಪ್ರವಚನಗಳನ್ನೊಳಗೊಂಡ ಶಾರಿಪುತ್ತಸಂಯುಕ್ತ ಎಂಬ ಖಂಡ ಸಂಯುಕ್ತ ನಿಕಾಯದಲ್ಲಿ ಅಂತರ್ಗತವಾಗಿದೆ. ಬುದ್ಧ ಇವನನ್ನು ಧರ್ಮಸೇನಾಪತಿಯೆಂದು ಕರೆದು ಸಮ್ಮಾನಿಸುತ್ತಿದ್ದ. ಇವನ ತಮ್ಮ ರೇವತನೆಂಬವನೂ ಭಿಕ್ಷುವಾಗಿದ್ದ.	
											(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ